Friday, February 1, 2013

ಐದು ಬೆರಳು ಕೂಡಿ ಒಂದು ಮುಷ್ಟಿಯು

Republic Day Songs
Lyrics - H S Venkatesha Murthy
Music - B V Srinivas
Singers - Chorus
Link - http://www.kannadaaudio.com/Songs/Patriotic/BharataBhoomiNannaThayi/Aidu.ram

ಐದು ಬೆರಳು ಕೂಡಿ ಒಂದು ಮುಷ್ಟಿಯು
ಹಲವು ಮಂದಿ ಸೇರಿ ಈ ಸಮಷ್ಟಿಯು
ಬೇರೆ ಬೇರೆ ಒಕ್ಕಲು ಒಂದೆ ತಾಯ ಮಕ್ಕಳು
ಕೂಡಿ ಹಾಡಿದಾಗ ಗೆಲುವು ಗೀತೆಗೆ
ಭರತ ಮಾತೆಗೆ ಭರತ ಮಾತೆಗೆ
ಮೊಳಗಲಿ ಮೊಳಗಲಿ ನಾಡಗೀತವೂ
ಮೂಡಲಿ ಮೂಡಲಿ ಸುಪ್ರಭಾತವೂ

ಹಿಮಾಲಯದ ನೆತ್ತಿಯಲ್ಲಿ ಕಾಶ್ಮೀರದ ಬಿತ್ತಿಯಲ್ಲಿ
ಅಸ್ಸಾಮಿನ ಕಾಡಿನಲ್ಲಿ ಐದು ನದಿಯ ನಾಡಿನಲ್ಲಿ
ಹೊತ್ತಿಯುರಿವ ಬೆಂಕಿಯಾರಿ ತಣ್ಣಗಾಗಲಿ
ಬಂಜರಲ್ಲೂ ಹಚ್ಚ ಹಸಿರು ಬೆಳೆದು ತೂಗಲಿ
ಗಂಗೆ ತಂಗಿ ಕಾವೇರಿಯ ತಬ್ಬಿಕೊಳ್ಳಲಿ

ಲಡಾಕ್ ಖನೆಫಾ ಗಡಿಗಳಲ್ಲಿ ಯಂತ್ರಾಲಯ ಗುಡಿಗಳಲ್ಲಿ
ಭತ್ತ ಗೋಧಿ ಬೆಳೆಯುವಲ್ಲಿ ಪ್ರೀತಿಯು ಮೈ ತಳೆಯುವಲ್ಲಿ
ದುಡಿವ ಹಿಂದು ಮುಸಲ್ಮಾನರೊಂದುಗೂಡಲಿ
ಆರದಿರಲಿ ಪ್ರೀತಿ ದೀಪ ಕಣ್ಣ ಗೂಡಲಿ
ಎದೆಯ ಕೊಳೆಗಳನ್ನು ಅಶೃ ಧಾರೆ ತೊಳೆಯಲಿ

Wednesday, January 30, 2013

ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ

Republic Day Songs
Lyrics - Dr. Sa Shi Marulayya
Music - B V Srinivas
Singer - Rajesh Krishnan
Link - http://www.kannadaaudio.com/Songs/Patriotic/BharataBhoomiNannaThayi/Vesha.ram

ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ
ಒಂದೇ ತಾಯ ಮಕ್ಕಳೆಂದು ಘೋಶಿಸೋಣ ಸಂತತ

ತೀರ್ಥ ನಗೆಯ ಕ್ಷೇತ್ರವಿದೋ ಭವ್ಯ ನಾಡು ಭಾರತ
ಋಷಿಗಳುಸಿರ ಹರಕೆ ಹೊತ್ತ ದಿವ್ಯ ನಾಡು ಭಾರತ
ಕಡಲುಗಳನೆ ಉಡುಗೆಯುಟ್ಟು
ಘಟ್ಟದೊಳು ಬಳೆಯ ತೊಟ್ಟು
ನದಿ ನದಗಳ ಹಾರವಿಟ್ಟು
ಸೇತುವಿಂದ ಸಿಂಧುವರೆಗೂ ಬೆಳೆದು ನಿಂತ ಭಾರತ
ಭಂಗಗೊಳದ ವಂಗ ನಾಡ ಕೂಡಿ ಮೆರೆದ ಭಾರತ
ಇದೇ ನಮ್ಮ ಭಾರತ ಪುಣ್ಯ ಭೂಮಿ ಭಾರತ

ಭರತ ಖಂಡದಿಂದಲೇನೆ ನಿನಗೆ ಮೋಕ್ಷ ಪ್ರಾಪ್ತಿ
ತಪ್ಪಿ ನುಡಿದೆ ಎಂದರಹುದು ನಿನಗೆ ತಕ್ಕ ಶಾಸ್ತಿ
ಯಾವ ದೇಶದಲ್ಲೇ ದುಡಿ ಯಾವ ಮಣ್ಣಿನಲ್ಲೇ ಮಡಿ
ನಿಂತ ನೆಲವು ಹಿಡಿದ ಹುಡಿ ಭರತ ಭೂಮಿ ಎಂದು ತಿಳಿ

ಮಣ್ಣ ಮೋಹ ಬಿಟ್ಟರಿಲ್ಲೋ ನಿನಗೆ ಬೇರೆ ಸದ್ಗತಿ
ಬರಿಯ ಮಾತಿನಲ್ಲೇ ಮುಗಿವುದಲ್ಲೋ ನಿನ್ನ ಸಂಸ್ಕೃತಿ
ಮಾನವತೆಯ ಶುಚಿ ಮತಿ ಸನಾತನದ ಸತ್ಕೃತಿ

Tuesday, January 29, 2013

ನದನದಿಗಳ ಗಿರಿವನಗಳ ತಾಯೆ ಭರತಮಾತೆ

Republic Day Songs
Lyrics - K S Narasimha Swamy
Music - Mysore Ananthaswamy
Singers - B K Sumitra, Soumya, Udupa, Srinivasa


ನದನದಿಗಳ ಗಿರಿವನಗಳ ತಾಯೆ ಭರತಮಾತೆ
ಓಂಕಾರದ ಝಂಕಾರದ ನಿನಗಿದೋ ಶುಭಗೀತೆ

ಹಿಮಚು೦ಬಿತ ಶಿಖರದಲ್ಲಿ ತಾಯೆ ನಿನ್ನ ನೆಲಸು
ಬಿರುಗಾಳಿಯ ಭಿತ್ತಿಯಿಂದ ನೀ ಎಮ್ಮನು ಹರಸು

ಗಂಗೆಯಮುನೆ ಸಂಗಮದಲಿ ನಿನ್ನ ವೇದಘೋಷ
ದೇವದಾರು ವನಗಳಲ್ಲಿ ನಿನ್ನ ಮಂದಹಾಸ

ವಿಂಧ್ಯಾಚಲ ಗೀತೆಯಲ್ಲಿ ಸಂಧ್ಯಾರುಣ ಛಾಯೆ
ಕಾವೇರಿಯ ತೆರೆಗಳಲ್ಲಿ ಮೀನಾಕ್ಷಿಯ ಮಾಯೆ

ಪರ್ವತಗಳ ಶಿಖರದಿಂದ ಕಡಲಂಚಿನ ತನಕ
ತಾಯೆ ನಿನ್ನ ಮಕುಟದಿಂದ ಹೊಳೆಯಲಿ ಮಣಿಕನಕ

Monday, January 28, 2013

ನಮ್ಮ ತಾಯಿ ಭಾರತಿ

Republic Day Songs
Lyrics - R N Jayagopal
Music - VijayaBhaskar
Singers -  P B Srinivas
Link - http://www.kannadaaudio.com/Songs/Patriotic/Namma.ram

ನಮ್ಮ ತಾಯಿ ಭಾರತಿ ನಮ್ಮ ನಾಡು ಭಾರತ
ನಮ್ಮ ರೀತಿ ನಮ್ಮ ನೀತಿ ನಮ್ಮ ಉಸಿರು ಭಾರತ

ಹಕ್ಕಿಯಂತೆ ಹಾರಿ ನಾವು ನಾಡ ನೋಡುವ
ಹತ್ತು ದೇಶದಲ್ಲಿ ತಾಯ ಕೀರ್ತಿ ಹಾಡುವ
ಶಾಂತಿ ಸ್ನೇಹ ಪ್ರೇಮದ ಸಂದೇಶವ ಸಾರುವ

ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು
ಏಳು ಸ್ವರವು ಸೇರಿ ಸಂಗೀತವಾಯಿತು
ವಿವಿಧ ನುಡಿಯು ವಿವಿಧ ನಡೆಯು ಕಲೆತ ವಿವಿಧ ಭಾರತಿ

ನಮ್ಮ ನಾಡು ನಡೆದು ಬಂದ ಹಾದಿ ನೆನೆಯುವ
ಆದ ತಪ್ಪನೆಲ್ಲ ಅರಿತು ಪಾಠ ಕಲಿಯುವ
ಕರ್ಮವೀರರಾಗಿ ಪ್ರಗತಿಪಥದಿ ಮುಂದೆ ಸಾಗುವ

ನಮ್ಮ ತಾಯ ಸೇವೆಗಾಗಿ ನಾವು ದುಡಿಯುವ
ನಮ್ಮ ನಾಡ ರಕ್ಷಣೆಗೆ ನಿಂತು ಮಡಿಯುವ
ಜಾತಿಮತದ ಭೇದಗಳನು ತೊರೆದು ಒಂದುಗೂಡುವ