Friday, January 11, 2013

ಮಾತಿಲ್ಲದ ಗಳಿಗೆ ....ಮೌನ

Album - Ninna Nenapu
Singers - Nitin Raghuveer, Supriya Aacharya
Link - http://www.kannadaaudio.com/Songs/Pop/NinnaNenapu/Mouna.ram

ಮಾತಿಲ್ಲದ ಗಳಿಗೆ
ಎಳೆ ಬಿಸಿಲ ಕಿರಣಗಳಲ್ಲಿ ಧೂಳಿನಾಟದ ಮೌನ
ಮನದಿ ನೂರು ದನಿಗಳ ಕಲಹ

ಹಿಮ ಕವಿದ ಹೃದಯವ ತಡವಿ ಕ್ಷಣದಿ ಬಯಲಾದ ಮಾಯೆ
ಕರಗಿ ನಿಂತ ನೀರಿನ ಮೇಲೆ ಅಲೆವ ಚಂದ್ರನ ಮೌನ

ಅದರುವ ತುಟಿ ಮೀರದಂತೆ ಎದೆಯಲಿ ಅದುಮಿತ್ತ ಭಾವ
ಮಡುಗಟ್ಟಿದ ಆಗಸದಲ್ಲಿ ಹನಿಯೊಡೆಯದ ಮೌನ

ಇರುಳು ಕಂಡ ಬಣ್ಣದ ಕನಸು ಕಲಸಿಹೋಗುವ ನಸುಗು
ಹಣ್ಣೆಲೆಯ ಅಂಚಿನಲ್ಲಿ ಮಂಜು ಹನಿಗಳ ಮೌನ

ಬಿಸಿಯುಸಿರಲ್ಲಿ ಬೆಂದ ಒಡಲು ಕುದಿವ ಉಪ್ಪಿನ ಕಡಲು
ಕೆಂಪಡರಿದ ಕಂಗಳಲ್ಲಿ ಉಕ್ಕಿ ಹರಿಯದ ಮೌನ

Thursday, January 10, 2013

ನಗುವ ನಯನ ಮಧುರ ಮೌನ

Theme - ಮೌನ
Lyrics - R N Jayagopal
Music - Ilayaraja
Singers - S Janaki & S P Balasubramaniam
Link - http://www.youtube.com/watch?v=SIeqFuk-ZuU

ನಗುವ ನಯನ ಮಧುರ ಮೌನ
ಮಿಡಿವಾ ಹೃದಯಾ ಇರೆ ಮಾತೇಕೆ?
ಹೊಸ ಭಾಷೆಯಿದು.. ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ?

ನಿಂಗಾಗಿ ಹೇಳುವೆ ಕತೆ ನೂರನು
ನಾನಿಂದು ನಗಿಸುವೆ ಈ ನಿನ್ನನು
ಇರುಳಲ್ಲು ಕಾಣುವೆ ಕಿರು ನಗೆಯನು
ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು
ಜೊತೆಯಾಗಿ ನಡೆವೆ ನಾ ಮಳೆಯಲೂ
ಬಿಡದಂತೆ ಹಿಡಿವೆ ಈ ಕೈಯ್ಯನು
ಗೆಳೆಯ ಜೊತೆಗೆ ಹಾರಿ ಬರುವೆ
ಬಾನಾ ಎಲ್ಲೆ ದಾಟಿ ನಲಿವೆ


ಈ ರಾತ್ರಿ ಹಾಡು ಪಿಸು ಮಾತಲಿ
ನಾ ತಂದೆ ಇನಿದಾದ ಸವಿ ರಾಗವ
ನೀನಲ್ಲಿ ನಾನಿಲ್ಲಿ ಏಕಾಂತವೆ
ನಾ ಕಂಡೆ ನನ್ನದೆ ಹೊಸ ಲೋಕವ
ಈ ಸ್ನೇಹ ತಂದಿದೆ ಎದೆಯಲ್ಲಿ
ಎಂದೆಂದೂ ಅಳಿಸದ ರಂಗೋಲಿ
ಆಸೆ ಹೂವ ಹಾಸಿ ಕಾದೆ
ನಡೆ ನೀ ಕನಸಾ ಹೊಸಕಿ ಬಿಡದೆ

Wednesday, January 9, 2013

ಬೇಸರಾಗಿದೆ ಮಾತು ಭಾರವಾಗಿದೆ ಮೌನ

Theme - ಮೌನ
Lyrics - K S Nissar Ahmed
Music - Prahlad Dixit
Link - http://www.youtube.com/watch?v=dorqQXYcBkE

ಬೇಸರಾಗಿದೆ ಮಾತು, ಭಾರವಾಗಿದೆ ಮೌನ
ನೋವು ಕರಗಿದೆ ಕಣ್ಣಲ್ಲಿ
ಅಡಿಗೆ ಚುಚ್ಚಿದ ಮುಳ್ಳು ಒಳಗದೆ ಮುರಿಯದಂತೆ
ಭಾವ ಕುಟುಕಿದೆ ಮನದಲಿ

ಮುರಿದ ಪ್ರೀತಿಯ ಮರೆಯೆ ಬಾಳಿನೊಳ ಹೊಕ್ಕಿರಲು
ಸಾವ ಭಯ ತಾನೆರಗಿತೊ
ಮಯೆಗೆ ಆಸೆರೆ ಪಡೆಯೆ ಹಾವ ಹೆಡೆಯಲಿ ನಿಂತ
ಹಕ್ಕಿಯಂದದಿ ಚೀರಿತೊ

ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ
ಕನಸುವಂತೆಯೆ ಮೊಳಕೆಗೆ
ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ
ಹೊಸತು ಬದುಕಿನ ಬಳಕೆಗೆ

ಯಾವ ಕಾಡಿನ ಮರೆಯ ಮರದ ಕೊಂಬೆಯನರಸಿ
ಜೀವ ರೆಕ್ಕೆಯ ಬಿಚ್ಚಿತೊ
ಯಾವ ಗವಿಗತ್ತಲಿನ ಮೌನ ಭಾರವ ಕನಸಿ
ಇದ್ದ ಹಕ್ಕೆಯ ಬಿಟ್ಟಿತೊ

Tuesday, January 8, 2013

ಮೌನ ತಬ್ಬಿತು ನೆಲವ

Theme - ಮೌನ
Lyrics - Gopalakrishna Adiga
Music - C Ashwath
Link - http://www.kannadaaudio.com/Songs/Bhaavageethe/BhaavaLahari/Mouna.ram

ಮೌನ ತಬ್ಬಿತು ನೆಲವ ಜುಮ್ಮೆನೆ ಪುಳಕಗೊಂಡಿತು ಧಾರಿಣಿ
ನೋಡಿ ನಾಚಿತು ಬಾನು ಸೇರಿತು ಕೆಂಪು ಸಂಜೆಯ ಕದಪಲಿ

ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು
ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು

ಇರುಳ ಸೆರಗಿನ ನೆಳಲು ಚಾಚಿತು ಬಾನು ತೆರೆಯಿತು ಕಣ್ಣನು
ನೆಲವು ತಣಿಯಿತು ಬೆವರು ಹನಿಯಿತು ಬಾಷ್ಪ ನೆನೆಸಿತು ಹುಲ್ಲನು

ಮೌನ ಉರುಳಿತು ಹೊರಳಿತೆದ್ದಿತು ಗಾಳಿ ಭೋರೆನೆ ಬೀಸಿತು
ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು

Monday, January 7, 2013

ಮೊದಲ ದಿನ ಮೌನ

Theme - ಮೌನ
Lyrics - K S Narasimha Swamy
Music - C Ashwath
Link - http://www.kannadaaudio.com/Songs/Bhaavageethe/Live-Concert-4-Pallavi-Arun/Modala.ram

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ 
ಚಿಂತೆ ಬಿಡಿ ಹೂವ ಮುಡಿದಂತೆ 
ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ 
ಜೀವದಲಿ ಜಾತ್ರೆ ಮುಗಿದಂತೆ

 
ಎರಡನೆಯ ಹಗಲು ಇಳಿಮುಖವಿಲ್ಲ ಇಷ್ಟು ನಗು 
ಮೂಗುತಿಯ ಮಿಂಚು ಒಳಹೊರಗೆ 
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು 
ಬೇಲಿಯಲಿ ಹಾವು ಹರಿದಂತೆ

 
ಮೂರನೆಯ ಸಂಜೆ ಹೆರಳಿನ ತುಂಬಾ ದಂಡೆ ಹೂ 
ಹೂವಿಗೂ ಜೀವ ಬಂತಂತೆ 
ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ