Thursday, February 14, 2013

ನೀನು ಮುಗಿಲು ನಾನು ನೆಲ

Valentine's Day Special - ನಾನು ನೀನು , ನೀನು ನಾನು
Lyrics - Dr. G S Shivarudrappa

Version 1
Link - http://www.kannadaaudio.com/Songs/Bhaavageethe/Haadu-Haleyadaadarenu-2/Neenu.ram )Music - C Ashwath, Singer - Rathnamala Prakash)

Version 2
Link - http://www.kannadaaudio.com/Songs/Bhaavageethe/Navodaya-GS-Shivarudrappa/Neenu.ram (Music - Padma Charan, Singer - Rathnamala Prakash)

ನೀನು ಮುಗಿಲು ನಾನು ನೆಲ
ನಿನ್ನ ಒಲವೆ ನನ್ನ ಬಲ
ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ

ನಾನು ಎಳೆವೆ ನೀನು ಮಣಿವೆ
ನಾನು ಕರೆವೆ ನೀನು ಸುರಿವೆ
ನಮ್ಮಿಬ್ಬರ ಒಲುಮೆ  ನಲುಮೆ ಜಗಕಾಯಿತು ಹುಣ್ಣಿಮೆ
ನಾನಚಲದ ತುಟಿಯೆತ್ತುವೆ
ನೀ ಮಳೆಯೊಲು ಮುತ್ತನಿಡುವೆ
ನಿನ್ನಿಂದಲೇ ತೆರೆವುದೆನ್ನ ಚೈತನ್ಯದ ಕಣ್ಣೆವೆ

ಸೂರ್ಯ ಚಂದ್ರ ಚಿಕ್ಕೆಗಣ್ಣ
ತೆರೆದು ನೀನು ಸುರಿವ ಬಣ್ಣ
ಹಸಿರಾಯಿತು ಹೂವಾಯಿತು ಚೆಲುವಾಯಿತು ಈ ನೆಲ
ನೀನು ಗಂಡು ನಾನು ಹೆಣ್ಣು
ನೀನು ರೆಪ್ಪೆ ನಾನು ಕಣ್ಣು
ನಮ್ಮಿಬ್ಬರ ಮಿಲನದಿಂದ ಸುಫಲವಾಯ್ತು ಜೀವನ

Wednesday, February 13, 2013

ನೀನು ಮಾಮರವಾದೆ ನಾನು ಆಗಿಹೆ ಕೋಗಿಲೆ

Valentine's Day Special - ನಾನು ನೀನು , ನೀನು ನಾನು
Lyrics - M N Vyasa Rao
Music - Upasana Mohan
Singer - Archana Udupa
Link - http://www.kannadaaudio.com/Songs/Bhaavageethe/Neenillade-Nanagenide/Neenu.ram

ನೀನು ಮಾಮರವಾದೆ ನಾನು ಆಗಿಹೆ ಕೋಗಿಲೆ
ನೂರು ಸ್ವರವನು ತೆರೆದು ಹಾಡಿದೆ ನಿನ್ನ ಪ್ರೀತಿಯ ನೆರಳಲಿ

ಪ್ರೀತಿ ನುಡಿಗಳು ಅರಳಿ ಬಂದವು ಮೊದಲ ಬಾರಿಗೆ ತುಟಿಯಲಿ
ಎದೆಯ ಆಳದ ಭಾವ ಬಿರಿದವು ಕನಸಿನಂಗಳ ತೋಟದಿ

ಜೀವ ರಸವನು ಹರಿಸಿ ಯಾವುದೊ ನದಿಯು ನನ್ನಲಿ ಸೇರಿತು
ಯಾವ ಮಧುವಿನ ಯಾವ ತುಟಿಯೊ ಹಲವು ಬಣ್ಣವ ತೆರೆಸಿತು

ನೀನೆ ಮಾಮರ ನಾನೆ ಕೋಗಿಲೆ ಹೃದಯ ಒಲವಿನ ಬಾಗಿಲು
ಅಮರವಾಗಿದೆ ಪ್ರೇಮ ಜಗದೊಳು ಸತತ ಹರಿಯುತ ಈಗಲು

Tuesday, February 12, 2013

ನಾನು ಸರಸಿ ನೀನು ಅರಸ

Valentine's Day Special - ನಾನು ನೀನು , ನೀನು ನಾನು
Lyrics - Dr. Da Ra Bendre
Music - Yashavantha Halibindi
Singer - Sangeetha Katti
Link - http://www.kannadaaudio.com/Songs/Bhaavageethe/PatharagittiPakka/Naanu.ram

ನಾನು ಸರಸಿ ನೀನು ಅರಸ
ಆಳಿ ನೋಡ ಬಾ
ನಾನು ನೀರೆ ನೀನು ನಲ್ಲ
ಬಾಳಿ ನೋಡ ಬಾ

ನಾನು ಹಣ್ಣು ನೀನು ಗಿಣಿಯು
ಕುದುಕಿ ನೋಡ ಬಾ
ನಾನು ಗೆಳತಿ ನೀನು ಗೆಳೆಯ
ಬದುಕ ಮಾಡ ಬಾ

ನಾನು ನೋಟ ನೀನು ಕಣ್ಣು
ಬೆಳಕ ನೀಡ ಬಾ
ನಾನು ಮಾಯೆ ನೀನು ಈಶ
ಮೋಡಿಯಾಡ ಬಾ

ಗಾಳಿ ನಾನು ಬಾನು ನೀನು
ಮೂಡಿ ನೋಡ ಬಾ
ಗೀತ ನಾನು ಪ್ರೀತ ನೀನು
ಕಟ್ಟಿ ಹಾಡ ಬಾ

Monday, February 11, 2013

ನಾನೆ ವೀಣೆ ನೀನೆ ತಂತಿ

Valentine's Day Special - ನಾನು ನೀನು, ನೀನು ನಾನು
Lyrics - Kuvempu
Music - H K Narayana
Singer - Manjula Gururaj
Link - http://www.kannadaaudio.com/Songs/Bhaavageethe/NaaneVeeneNeeneTanti/Naane.ram

ನಾನೆ ವೀಣೆ ನೀನೆ ತಂತಿ ಅವನೆ ವೈಣಿಕ
ಮಿಡಿದನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು ನಾದ ರೂಪಕ

ಭುವನವೆಲ್ಲ ಸವಿಯ ಸೊಲ್ಲ ಕವಿಯ ಗಾನ
ನನ್ನ ನಿನ್ನ ಹೃದಯಮೀನ
ಕಲ್ಲಿ ಜೇನ ಸೊಗದ ಸ್ನಾನ ಅಮೃತ ಪಾನ

ತಂತಿಯಿಂಚರದಿ ವಿಪಂಚಿ ರಸ ಪ್ರಳಯಿಸೆ
ನನ್ನ ನಿನ್ನ ಜೀವಮಾನ
ತಾನ ತಾನ ತನನ ತಾನ ಪ್ರಾಣ ಪುಳಕಿಸೆ

Friday, February 8, 2013

ಹೊಳೆವ ನೀರ ಮೇಲೆ

Theme - ಬೆಳುದಿಂಗಳು/Beludingalu
Lyrics - Kuvempu
Music - T R Srinivas
Singers - T R Srinivas
Link - http://www.kannadaaudio.com/Songs/Bhaavageethe/JayaBharathaJananiyaTanujaate/Holeva.ram

ಹೊಳೆವ ನೀರ ಮೇಲೆ ಕುಣಿವ ಬೆಳದಿಂಗಳ ಕಿರಣ ರಾಣಿ
ಕುಣಿದು ಕುಣಿದು ದಣಿಯದಿರುವ ನಿಜ್ಜನಗೆಯ ತವರು ಜಾಣಿ

ಸೂರ್ಯ ಲೋಕದಿಂದ ಬಂದು ತಂಪು ಗೀಟು ತಿಂಗಳಿನಲಿ
ಕುಣಿತ ಕಲಿತು ಇಳೆಗೆ ಇಳಿದ ಬೆಳದಿಂಗಳ ಕಿರಣ ರಾಣಿ

ನೀರ ರಂಗದಲ್ಲಿ ನೆಲಸಿ ತೆರೆಯ ತಾಳದೊಡನೆ ಬೆರೆತು
ನೀಲ ನಭದ ತಾರೆ ನೀರೆ ನೋಡುತಿರಲು ಕುಣಿವ ರಾಣಿ

ಎಲ್ಲ ಕಡೆಗು ತುಂಬಿ ತುಳುಕಿ ನೆರವು ಎಂಬ ತೆರದಿ ತೋರಿ
ನಂಬುವವರ ನಲ್ಮೆ ಕಾಂಬ ಹಿಗ್ಗು ಕಡಲ ಕುರುಹು ಜಾಣಿ
 

Thursday, February 7, 2013

ಎಳೆ ಬೆಳುದಿಂಗಳು

Theme - ಬೆಳುದಿಂಗಳು/Beludingalu
Lyrics - Dr. G S Shivarudrappa
Music - C Ashwath
Singers - Rathnamala Prakash & Malathi Sharma
Link  - http://www.kannadaaudio.com/Songs/Bhaavageethe/Haadu-Haleyadaadarenu-3/Ele.ram

ಎಳೆ ಬೆಳುದಿಂಗಳು ಮರದಡಿ ಬರೆದಿದೆ ನೆಳಲಿನ ಚಿತ್ತಾರ
ಬಾನೊಳು ಚದುರಿವೆ ಕಿರು ಮಿರು ತಾರಗೆ ಇರುಳಿನ ಸಿಂಗಾರ

ಸಪ್ತಮಿ ಚಂದ್ರನ ತೃಪ್ತಿಯ ನಗೆಯಲಿ ಬಾನೇ ಬಂಗಾರ
ಇರುಳಿನ ಸ್ತಬ್ಧತೆ ಬರೆದಿದೆ ಕೊರೆದಿದೆ ನಿಶ್ಚಲ ತರುಣಿಕರ

ಪ್ರಶಾಂತ ನಿರ್ಮಲ ಧ್ಯಾನ ದಿಗಂಬರ ಶಾರದ ಯೋಗಿವರ
ಕರುಣೆಯೊಳೆತ್ತಿರೆ ಇರವಿನ ಭಾರವೆ ತಾನಾಗಿದೆ ಹಗುರ

Wednesday, February 6, 2013

ಬಾರಯ್ಯ ಬೆಳದಿಂಗಳೆ

Theme - ಬೆಳುದಿಂಗಳು/Beludingalu
Janapada Geethe
Music - P Kalinga Rao
Singers - P Kalinga Rao, Mohanakumari & Party
Link - http://www.kannadaaudio.com/Songs/Bhaavageethe/BaarayyaBeladingale/Baarayya.ram

ಬಾರಯ್ಯ ಬೆಳದಿಂಗಳೆ ಬಾರಯ್ಯ ಬೆಳದಿಂಗಳೆ
ನಮ್ಮೂರ ಹಾಲಿನಂಥ ಬೆಳದಿಂಗಳೆ

ಒಂದೇ ಹಕ್ಕಿ ಬಂದಾವಕ್ಕಾ ಹರಗರನಾಡಿ ನಿಂದಾವಕ್ಕಾ
ತಾಮಾಲೂರ ಹೋಳೇಯಿಂದ ಕುಂತೂನಿಂತೂ ಬರೂತಿದ್ದಾ
ರಾಮಾನ್ಯಾರೆ ತಡಾದೋರೂ ಭೀಮಾನ್ಯಾರೇ ತಡಾದೋರೂ

ತಿಂಗ್ಳು ತಿಂಗ್ಳೀಗೆ ತಿಂಗಳು ಮಾವನ ಪೂಜೆ ಗರುಡಾನ ಪೂಜೆ ಘನ ಪೂಜೆ
ಕೊಲುಮಲ್ಲಿಗೆ ಕೋಲೇ ಕೊಲುಮಲ್ಲಿಗೆ ಕೋಲೇ
ಗರುಡಾನ ಪೂಜೆ ಘನ ಪೂಜೆ ತಿಂಗಳು ಮಾವಾ ನಿನಪೂಜೆ ಗಂಗೇ ದಿನದಾಗೇ
ಕೋಲುಮಲ್ಲಿಗೆ ಕೋಲೇ ಕೋಲುಮಲ್ಲಿಗೆ ಕೋಲೇ
ತಿಂಗಳುಮಾವನ ತಂಗಿ ಸೂತಕವಾಗಿ ಬೆಂಗೆ ಹೂವಿನ ಗುಡ್ಲಾಗೀ
ಕೋಲುಮಲ್ಲಿಗೆ ಕೋಲೇ ಕೋಲುಮಲ್ಲಿಗೆ ಕೋಲೇ
ತುಂಬೇಹೂವೀನಾ ಗುಡ್ಲಾಗಿ ತಿಂಗಳು ಮಾವಾ ಮೀಯನೆಂದರೇ ತಾವಿಲ್ಲಾ
ಕೋಲುಮಲ್ಲಿಗೆ ಕೋಲೇ ಕೋಲುಮಲ್ಲಿಗೆ ಕೋಲೇ
ಮೀಯನೆಂದರೇ ತಾವಿಲ್ಲಾ ತಿಂಗಳು ಮಾವಾ ಹೋಗಯ್ಯ ಮುಗಿಲಾ ತೆರೆವೀಗೇ
ಕೋಲುಮಲ್ಲಿಗೆ ಕೋಲೇ ಕೋಲುಮಲ್ಲಿಗೆ ಕೋಲೇ